ಭಾವಗೀತೆಗಳ ಭಂಡಾರವೇ
ನೀನು , ಓ ಮುದ್ದು ಮಗುವೆ
ನಿನ್ನೊಂದೊಂದು ಲೀಲೆಯೂ
ಒಂದು ಸುಖದ ಗೀತೆ !
ನೀನು ಆಗಮಿಸುವೆಯೆಂದು
ಅರಿತಾಗ ನಾವು ಹೆಣೆದ
ಕನಸುಗಳೆಷ್ಟು ಬಲ್ಲೆಯಾ ?
ನಿನ್ನ ಬರುವಿಕೆಗಾಗಿ ಮೈ
ಮನವೆಲ್ಲ ಕಾತುರತೆಯ
ಹಂದರವಾಗಿ ನಿದ್ರೆ ಜಾರಿದ
ರಾತ್ರಿಗಳೆಷ್ಟು ಬಲ್ಲೆಯಾ ?
ನನಗೆ ನಡೆದ ಆರೈಕೆಗಳೆಲ್ಲಾ
ನಿನ್ನ ಬರುವಿಕೆಗೆ ನೇಯ್ದ
ರತ್ನಕಂಬಳಿ ಕಂದಾ.......!

ನಿನ್ನ ಆ ಚೆಂದುಟಿ ನಗುವ
ನೆನೆಯುತ್ತಾ ನನ್ನ ಕ್ಲೇಶಗಳೆಲ್ಲಾ
ಕಳೆದೇಹೋದವು ಕಂದಾ ...........!
ಅಂತೂ ನೀನು ಧರೆಗಿಳಿದೆ
ನಮ್ಮೆಲ್ಲ ಕನಸುಗಳ ಸಾಕಾರ
ಮೂರ್ತಿಯಾಗಿ ಬಂದೆ ನೀ ಕಂದಾ .......!
ಅನುಭವಿಸಿದ ಆದಿನಗಳ ನೋವಿಗೆ
ಇಂದು ನಿನ್ನ ನಗುವಿನ ಜೇನಿನ ಸ್ವಾದ
ನೋವಿನಲ್ಲೂ ಸುಖವನಿತ್ತೆ ಓ ಕಂದಾ .....!

ಸುಖವಾಗಿರು ಮುದ್ದು ಮಗುವೆ
ತಾಯ ಮಡಿಲ ಸೌಭಾಗ್ಯ ನಿನಗೆ
ಜೀವನದ ಸುಧೆ ನಿನ್ನದಾಗಲಿ ..........ಕಂದಾ !