ಶುಕ್ರವಾರ, ಜನವರಿ 27, 2012

ನನಗೇಕೆ ಬೇಕು ಸನ್ಮಾನ ...................................................??????


ನನಗೇಕೆ ಬೇಕು ಸನ್ಮಾನ .................?
ನಿಮ್ಮ ಹೃದಯದಲ್ಲಿರಲು ನನ್ನ ಸ್ಥಾನ .
ನನಗೇಕೆ ಬೇಕು ಸನ್ಮಾನ ................?


ಅಳುಕುತ್ತಾ  ಕೇಳಿದೆ ನನ್ನ  ಮನ 

.  ಅನ್ನ ನೀಡಿ ಹೊತ್ತು  ಪೊರೆವ ಭೂಮಿ
ಜೀವಿಗಳಿಗೆ ಉಸಿರು ನೀಡುವ ಆ  ಗಾಳಿ
ಇಳೆಯ  ನೀರಡಿಕೆ ನೀಗಿಪ   ಮಳೆ ಹನಿ       
ಎಂದೂ ಬೇಡಲಿಲ್ಲ  ಸನ್ಮಾನ  ...........!!
 ನಾ ಪಡೆದರೆ .......ಸನ್ಮಾನ ,
ಆಗದೆ  ಬದುಕಿನ ಲಯಕ್ಕೆ ನೋವಿನ  ಸಿಂಚನ
ಬೇಡ ಬಿಡಿ ...ನನಗೇಕೆ  ಬೇಕು ಸನ್ಮಾನ


ಬಣ್ಣ ಬಣ್ಣದ ಚಿತ್ತಾರ ಚೆಲುವಿನ ಚಿಟ್ಟೆಗಳು,
ಹಾಡಿ ಹಾರಿ ನಲಿದಿಹ ಶುಕ ಪಿಕಗಳು ,
ಮುಗ್ಧ ಮನದ ಆ  ಮುದ್ದು ಮಕ್ಕಳು
ಎಂದೂ ಕೋರಲಿಲ್ಲ   ಸನ್ಮಾನ ...!!

 ನಾ ಪಡೆದರೆ .......ಸನ್ಮಾನ ,
ಆಗದೆ  ಬದುಕಿನ ಲಯಕ್ಕೆ ನಾಚಿಕೆಯ ಮಜ್ಜನ
ಬೇಡ ಬಿಡಿ ...ನನಗೇಕೆ  ಬೇಕು ಸನ್ಮಾನ


 ಮಾಮರದಿ  ಹಾಡುವ  ಕುಹೂ ಕುಹೂ ಕೋಗಿಲೆ ,
 ಕಾನನದಿ ನರ್ತಿಸುವ ಮುದ್ದು ಮಯೂರಿಯ ಕಲೆ
ಕಾನನದ  ಆಭರಣಗಳಾದ ಆ  ವನ್ಯ ಜೀವಿಗಳೇ
    ಬಯಸಲಿಲ್ಲ ಸನ್ಮಾನ    ....!!
   ನಾ ಪಡೆದರೆ .......ಸನ್ಮಾನ ,
ಆಗದೆ  ಬದುಕಿನ ಲಯಕ್ಕೆ ಕಪಟತೆಯ ದರ್ಶನ
ಬೇಡ ಬಿಡಿ ...ನನಗೇಕೆ  ಬೇಕು ಸನ್ಮಾನ
ತೋಟದಲಿ  ಕಂಡ ಎಷ್ಟೊಂದು  ಹೂವು ಹಣ್ಣುಗಳು
 ನೀರಲ್ಲಿ ನಲಿಯುವ ಆ ವಿಸ್ಮಯ    ಮೀನುಗಳು
ಬಾನಲ್ಲಿ ಚಿತ್ತಾರ ಬಿಟ್ಟ  ಕಾಮ ಬಿಲ್ಲು
ಕೇಳಲಿಲ್ಲ ಸನ್ಮಾನ ........!!
  ನಾ ಪಡೆದರೆ .......ಸನ್ಮಾನ ,
ಆಗದೆ  ಬದುಕಿನ ಓಘಕ್ಕೆ   ಕುಟಿಲತೆಯ  ದರ್ಶನ

ಬೇಡ ಬಿಡಿ ...ನನಗೇಕೆ  ಬೇಕು ಸನ್ಮಾನ

ಇಡೀ  ಪರಿಸರಕ್ಕೆ ಬೇಡದಿದ್ದರೂ  ಯಾವುದೇ ಸನ್ಮಾನ
 ಬೇಕೇ ಬೇಕೆಂದು ಬಯಸುತ್ತಿದೆ ಈ  ಮರ್ಕಟ ಮನ
ಸನ್ಮಾನದ ಕೂಪಕ್ಕೆ ಬಿದ್ದು ಕರಗುತಿದೇ  ಜ್ಞಾನ
ಸತ್ಯ  ಎದುರಿದ್ದರೂ  ಕಲಿಯದ  ಈ ವ್ಯರ್ಥ ಜೀವನ .